ಜೇನಿನ ಗೂಡೊಳು

Category: ಶ್ರೀದೇವಿ

Author: ಸ್ವಾಮಿ ಹರ್ಷಾನಂದ

ಜೇನಿನ ಗೂಡೊಳು ಹುದುಗಿಹ ಮಧುವೋಲ್
ದೇವನ ಹೃದಯದಿ ಹುದುಗಿಹ ಕರುಣೆಯು |
ದೀನರ ಆರ್ತರ ಕೂಗಿನ ಹೊಡೆತಕೆ
ಶಾರದೆ-ರೂಪದಿ ಸೂಸಿತು ಹರಿಯಿತು ||

ಮಾನಸ-ಸರಸಿಜ-ಮಂದಾಕಿನಿ-ಜಲ
ಭಾರತ-ಭೂಮಿಯ ಪಾವನಗೈದರೆ |
ಶಾರದರೂಪೀ ಕರುಣಾಗಂಗೆಯು
ವಿಶ್ವಕೆ ತಂಪಿನ ಸುಧೆಯನು ನೀಡಿತು ||

ತನ್ನನ್ನುಕಡಿವಗು ತಣ್ಣನೆ ನೆರಳನು
ನೀಡುವ ವೃಕ್ಷದ ತೆರದಲಿ ಶಾರದೆ |
ತನ್ನನು ಹಿಂಸಿಸಿ ಬಾಳಲು ಬಯಸಿದ
ಮೂರ್ಖರ ಮನ್ನಿಸಿ ಹರಸಿದಳಲ್ಲವೆ ||

ಸರ್ವವಿದ್ಯೆಗಳ ಮೂರುತಿ ನೀನು
ಭೋಗದ ಮೋಕ್ಷದ ದಾತೆಯು ನೀನೇ |
ಎನ್ನಯ ಹೃದಯದಿ ನಿನ್ನಯ ಭಕ್ತಿಯ
ತುಂಬಿಸು ಕೂಡಲೆ ಕೃಪೆಯನು ತೋರುತ ||

ನಾನೂ ನಿನ್ನಯ ಪುತ್ರನು ತಾಯೇ
“ದುರುಳನು ಈತನು, ಪುತ್ರನೆ!'ʼ ಎನದಿರು |
ದುರುಳ ಕುವರರಿದ್ದರು ಈ ಲೋಕದಿ
ದುರುಳ ಮಾತೆಯನು ಎಂದಿಗು ಕಾಣೆವು ||

ಹಗಲೂ ಇರುಳೂ ಪರರನು ಹಳಿಯುತ
ಬಾಳನು ಸವೆಸುತಲಿರುತಿಹ ಮರ್ತ್ಯರೆ |
ಬನ್ನಿರಿ ಬನ್ನಿರಿ ಎಲ್ಲರು ಇಲ್ಲಿಗೆ
ಕೇಳಿರಿ ಜನನಿಯ ಚರಮಾದೇಶವ ||

“ಸತತವು ವ್ರಣವನೆ ಬಯಸುವ ಮಕ್ಷಿಕೆ,
ಮಧುವನನವರತ ಹೀರುವ ಮಧುಕರ-
ಆವುದು ಅನುಕರಣೀಯವು ಎಂಬುದ
ಅರಿಯುತ ಮಧುಮಯವಾಗಿಸಿ ಜೀವನ!' ||