ಮಗುವಿನ ಮರುಳಿದು ಬಿಡದಲ್ಲ
Category: ಶ್ರೀಕೃಷ್ಣ
Author: ಕನಕದಾಸ
ಮಗುವಿನ ಮರುಳಿದು ಬಿಡದಲ್ಲ- ಈ ||ಪ||
ಜಗದೊಳು ಪಂಡಿತರಿದ ಬಿಡಿಸಿ ||ಅ||
ನೀರನು ಕಂಡರೆ ಮುಳುಗುತಿದೆ- ತನ್ನ
ಮೋರೆಯ ತೋರದೆ ಆಡುತಿದೆ
ಧಾರಿಣಿ ಹಲ್ಲಲಿ ಎಳೆಯುತಿದೆ- ದೊಡ್ಡ
ಭೈರವಾಕಾರದಿ ಕೂಗುತಿದೆ ||1||
ಪೊಡವಿಯ ಕೊಟ್ಟರೆ ಅಳೆಯುತಿದೆ- ತನ್ನ
ಕೊಡಲಿಯೊಳು ಭೂಪರ ಕಡಿಯುತಿದೆ
ಅಡವಿ ಕೋತಿಗಳ ಕೂಡುತಿದೆ- ಚೆಲ್ವ
ಮಡದಿಯರನು ಹಿಡಿದೆಳೆಯುತಿದೆ ||2||
ಉಟ್ಟಿದ್ದ ವಸ್ತ್ರವ ಬಿಸುಡುತಿದೆ- ತನ್ನ
ದಿಟ್ಟ ತೇಜಿಯನೇರಿ ನಲಿಯುತಿದೆ
ಸೃಷ್ಟಿಯೊಳು ಭೂಸುರರ ಪೊರೆವ ಜಗ
ಜಟ್ಟಿಯಾದಿಕೇಶವ ರಾಯನಂತೆ ||3||