ಮಗುವು ಕಾಣಿರಯ್ಯ ಮಾಯದ ಮಗುವು

Category: ಶ್ರೀಕೃಷ್ಣ

Author: ಕನಕದಾಸ

ಮಗುವು ಕಾಣಿರಯ್ಯ| ಮಾಯದ | ಮಗುವು ಕಾಣಿರಯ್ಯ ||ಪ||

ಸುಗುಣ ವಾದಿರಾಜರೆ ಮೂ
ಜಗವನು ತನ್ನುದರದೊಳಿಟ್ಟ ||ಅ||

ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನ
ಸಾಯಬಡಿದು ಧೇನುಕನ ವೃಷಭಾಸುರನ
ನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನ
ತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ ||1||

ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆ
ಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿ
ಶ್ರೀ ಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟು
ಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ ||2||

ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯ
ಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನ
ಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆ
ಕಡಲಿಗಟ್ಟಿ ಬಂದು ತಾಯ ತೊಡೆಯ ಮೇಲೆ ಮಲಗಿದಂಥ ||3||

ಕಲ್ಲಿಗಟ್ಟಿ ಗೂಡೆಯಲಿ ಗೋಲಿಯ ಚೀಲವನಿಕ್ಕಿ
ಹಿಲ್ಲಿ ಕಟ್ಟೋಗರ ಕಡಕಲಕ್ಕಳೆಯಾ ತುದಿಯಲಿ
ನಿಲ್ಲಿಸಿ ಪೆಗಲೊಳು ಕೊಂಬು ಕೋಲನೆ ಪಿಡಿದು
ಗೊಲ್ಲರೊಡಗೂಡಿ ನಮ್ಮೆಲ್ಲರ ಗೋವುಗಳ ಕಾಯ್ದ ||4||

ಶ್ರುತಿತತಿಗೆ ಗೋಚರಿಸದ ಅಚ್ಯುತನು ಭುವನಾದಿಮೂರ್ತಿ
ರತಿಪತಿ ಪಿತನು ಶೇಷಾದ್ಯಾರಾಧ್ಯನು
ಕ್ಷಿತಿಗಧಿಕ ವೇಲಾಪುರದ ಪತಿ ವೈಕುಂಠ ಕೇಶವನು
ಯತಿಯೆ ನೀ ನೋಡಯ್ಯ ಶರಣಾಗತನ ತೊಡೆಯಿಂ ಮಾಯವಾದ ||5||