ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ
Category: ಇತರೆ
Author: ಕನಕದಾಸ
ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ- ಇದರ
ಕುರುಹ ಪೇಳಿ ಕುಳಿತಿರುವ ಜನರು ||ಪ||
ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ, ಭಕ್ಷಿಸುವುದು ||1||
ನಡುವೆ ಕಲಿಯುಂಬುವುದು ನಡುನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡುವುದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು ||2||
ಕಂಜವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪ
ಸಂಜೀವ ಪಿತ ಆದಿಕೇಶವನೆ ಬಲ್ಲ ||3||