ಮರೆಯದಿರು ಮರೆಯದಿರು ಎಲೆ ಮಾನವ
Category: ಶ್ರೀಕೃಷ್ಣ
Author: ಕನಕದಾಸ
ಮರೆಯದಿರು ಮರೆಯದಿರು ಎಲೆ ಮಾನವ ||ಪ||
ಗರುವವೇತಕೆ ನಿನಗೆ ಎಲೆ ಮಂಕು ಜೀವ ||ಅ||
ರೂಪದಲಿ ಮನ್ಮಥನೆ ಶಾಪದಲಿ ಗೌತಮನೆ
ಕೋಪದಲಿ ದೂರ್ವಾಸ ಮುನಿಯೆ ನೀನು
ತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆ
ನಿಪುಣತ್ವದಲ್ಲಿ ನಾರದ ಮುನಿಯೆ ನೀನು ||1||
ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆ
ಗೀತದಲಿ ಗಂಧರ್ವನೇ ನೀನು
ವ್ರತದಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆ
ವಿತರಣ ಗುಣದಲಿ ಯಮಧರ್ಮನೆ ನೀನು ||2||
ನ್ಯಾಯದಲಿ ಭರತನೆ ಉಪಾಯದಲಿ ಕೃಷ್ಣನೇ
ಕಾಯಶುದ್ಧಿಯಲಿ ಅಂಬರೀಷನೆ ನೀನು
ಮಾಯದಲಿ ಕಾವ್ಯನೇ ದಾಯದಲಿ ಶಕುನಿಯೇ
ನೀ ಯಾರ ಹೋಲುವೆ ಎಲೆ ಮಾನವ ||3||
ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆ
ದೃಢ ಮನಸಿನಲಿ ರುಕ್ಮಾಂಗದನೆ ನೀನು
ಪಡೆಯಲ್ಲಿ ಕೌರವನೆ ನುಡಿಯಲ್ಲಿ ಗಾಂಗೇಯನೆ
ಮಡದಿಯರ ಭೋಗಕ್ಕೆ ಸುರಪತಿಯೆ ನೀನು ||4||
ಬಾಣದಲಿ ರಾಮನೇ ತ್ರಾಣದಲಿ ಭೀಮನೇ
ಕೇಣದಲಿ ಶಿಶುಪಾಲನೇನೊ
ಗುಣದಲಿ ಸುಧರ್ಮನೇ ರಣದಲಿ ಶಲ್ಯನೆ ಆನು
ಗುಣ್ಯವಾದದಲಿ ನರಪತಿಯೆ ನೀನು ||5||
ಛಲದಲ್ಲಿ ರಾವಣನೆ ಬಲದಲ್ಲಿ ವಾಲಿಯೇ
ನಿಲುಗಡೆಯ ಮನದಲ್ಲಿ ದ್ರೋಣನೇ ನೀನು
ಕುಲದಲಿ ವಸಿಷ್ಠನೇ ಗೆಲುವಿನಲಿ ಪಾರ್ಥನೇ
ಬಿಲುವಿದ್ಯೆಯಲಿ ಪರಶುರಾಮನೆ ನೀನು ||6||
ಶಕ್ತಿಯಲಿ ಹನುಮನೇ ಭಕ್ತಿಯಲಿ ವಿಭೀಷಣನೆ
ಕೀರ್ತಿಯಲಿ ಹರಿಶ್ಚಂದ್ರರಾಯನೆ ನೀನು
ಅರ್ತಿಯಲಿ ಶುಕಮುನಿಯೆ ಸ್ಫೂರ್ತಿಯಲಿ ಸೂರ್ಯನೇ
ಮುಕ್ತಿ ಸಾಧನಕೆ ಪ್ರಹ್ಲಾದನೆ ನೀನು ||7||
ಗೋತ್ರದಲಿ ಬ್ರಹ್ಮನೇ ಸೂತ್ರದಲ್ಲಿ ಕೌಶಿಕನೆ
ಪಾತ್ರದಲಿ ವಾಲ್ಮೀಕಿ ಋಷಿಯೆ ನೀನು
ಮಾತಿನಲಿ ಗುರುಸುತನೆ ಜ್ಯೋತಿಯಲಿ ಬೃಹಸ್ಪತಿಯೆ
ನೀತಿಮಾರ್ಗದಲಿ ಸಹದೇವನೇ ನೀನು ||8||
ಅಂಗದಲಿ ಅಜಮಿಳನೆ ಶೃಂಗದಲಿ ಮಾರುತನೆ
ಕಂಗೊಳಿಪ ತನದಲ್ಲಿ ಕಾಮಸುತನೆ
ಗಂಗೆಯನು ಪಡೆದಂಥ ನೆಲೆಯಾದಿಕೇಶವನ
ಹಿಂಗದೆ ಭಜಿಸಿ ಪಾವನನಾಗು ಮನುಜ ||9||