ಮರೆಯದಿರು ಮರೆಯದಿರು ಮನುಜಾ

Category: ಶ್ರೀಕೃಷ್ಣ

Author: ಕನಕದಾಸ

ಮರೆಯದಿರು ಮರೆಯದಿರು ಮನುಜಾ
ನಾರಾಯಣನ ಸ್ಮರಣೆಯನು ಮಾಡು ಮನುಜಾ ||ಪ||

ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಕೆರೆ ಬಾವಿಯೇಕೆ
ಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆ
ಮಂಗಳಾತ್ಮನಿರಲಿಕ್ಕೆ ಪರದೈವವೇಕೆ ||1||

ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆ
ಮೇಲುನಾಮವಿರಲಿಕ್ಕೆ ಕಟುಕು ಇನ್ನೇಕೆ
ಬಾಲಹನುಮನಿರಲಿಕ್ಕೆ ಹುಲುಕಪಿಗಳೇಕೆ
ಒಳ್ಳೆ ತುಳಸಿಯಿರಲಿಕ್ಕೆ ಕಗ್ಗೊರಲೆಯೇಕೆ ||2||

ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆ
ರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆ
ಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆ
ಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ ||3||