ಮಾಡು ದಾನ ಧರ್ಮ ಪರ

Category: ಇತರೆ

Author: ಕನಕದಾಸ

ಮಾಡು ದಾನ ಧರ್ಮ ಪರ ಉಪಕಾರದ ಮರೆಯದಿರೆಚ್ಚರಿಕೆ ||ಪ||
ಕೇಡು ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||

ಬಾಳು ಬದುಕು ಸಿರಿ ಇರುವಾಗ ಬಂಧುಬಳಗಗಳೆಚ್ಚರಿಕೆ
ಹಾಳು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ ||1||

ಮೂಢರ ಒಡನಾಡಿ ಮುಂದೆ ಕೆಡಲು ಬೇಡ ಮೋಸ ನೋಡೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆ ಕಂಡ್ಯ ನಟನೆ ಬೇಡೆಚ್ಚರಿಕೆ ||2||

ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ
ನಿನ್ನಾಯು ಮುಗಿಯಲು ಯಮದೂತರು ಬಂದು ಎಳೆಯುವರೆಚ್ಚರಿಕೆ ||3||

ಹೆಣ್ಣು ಹೊನ್ನು ಮಣ್ಣು ನಿನ್ನನಗಲಿ ಹೋಗುವರೆಚ್ಚರಿಕೆ
ಮುನ್ನ ಮಾಡಿದ ಪುಣ್ಯ ಬೆನ್ನತ್ತಿ ಬರುವುದು ಮುಂದೆ ನೋಡೆಚ್ಚರಿಕೆ ||4||

ಒಬ್ಬರಂತೆಲ್ಲರ ನೋಡು, ಸತ್ಕರ್ಮದಿ ಉಬ್ಬ ಬೇಡೆಚ್ಚರಿಕೆ
ಕಬ್ಬುಬಿಲ್ಲನ ಪಿತನ ಏಕಾಂತ ಭಾವದಿ ನೆರೆನಂಬು ಎಚ್ಚರಿಕೆ ||5||

ತಿಂದೋಡಿ ಬಂಧುಬಳಗ ತಪ್ಪಿಸಿಕೊಂಬರೆಂದು ನೋಡೆಚ್ಚರಿಕೆ
ಎಂದೆಂದು ಅಗಲದ ಬಂಧು ಶ್ರೀಹರಿ ನಮಗೆಂದು ನೋಡೆಚ್ಚರಿಕೆ ||6||

ಕಾಲನ ದೂತರು ಯಾವಾಗ ಎಳೆವರೊ ಕಾಣದು ಎಚ್ಚರಿಕೆ
ಬೇಲೂರು ಪುರವಾಸ ನೆಲೆಯಾದಿಕೇಶವನಾಳಾಗು ಎಚ್ಚರಿಕೆ ||7||