ಮಾವನ ಮನೆಯೊಳಗೆ ಇರಬಹುದೆ ಕೋವಿದರು

Category: ಶ್ರೀಕೃಷ್ಣ

Author: ಕನಕದಾಸ

ಮಾವನ ಮನೆಯೊಳಗೆ ಇರಬಹುದೆ ಕೋವಿದರು

ಹಾವು ಹಿಡಿಯಲು ಬಹುದು ಹರಣ ನೀಡಲು ಬಹುದು
ಬೇವ ಕಿಚ್ಚನು ಹಿಡಿದು ನುಂಗಬಹುದು
ಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತ
ಸಾವುದೇ ಲೇಸು ಅಭಿಮಾನಿಗಳಿಗೆ ||1||

ಪರರ ಸೇರಲು ಬಹುದು ಪತಿತರಲ್ಲಿರಬಹುದು
ಕೊರಳ ಘಾತಕಂಗೆ ಶಿರ ಒಪ್ಪಿಸಬಹುದು
ತರುಣಿಯಳ ತೌರು ಮನೆಯಲಿ ಇರುವುದಕಿಂತ
ತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು ||2||

ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದು
ಹೇವವನಿಕ್ಕಿ ಚೂರ್ಣವ ಮಾಡಲು
ಆವಾಗ ನೋಡಿದರು ಎನಗೆ ಹಿತರಿಲ್ಲೆಂದು
ಮಾವ ಹೊರಗಾಡುವನು ಚಿಕ್ಕ ನುಡಿಗಳನು ||3||

ಬಂದೊಂದು ತಿಂಗಳೊಳು ಬಹುಮಾನ ನಡತೆಗಳು
ಬಂದೆರಡು ತಿಂಗಳೊಳಗೆ ಹಿತವಾದವು
ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟುವುವು
ಸಂದೇಹವೇಕೆ ಸಂಸಾರಿಗಳಿಗೆ ||4||

ಈ ಪರಿಯಲುಂಬಂಥ ಅಳಿಯ ಭೋಜನಕಿಂತ
ಗೋಪಾಳ ಲೇಸು ಅಭಿಮಾನಿಗಳಿಗೆ
ಶ್ರೀಪತಿ ನೆಲೆಯಾದಿಕೇಶವನ ಚರಣ ಸ-
ಮೀಪದಲಿ ವಾಸಿಪುದೆ ವಾಸಿ ಮನವೆ ||5||

(* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.)