ಮುಟ್ಟಬೇಡ ಮುಟ್ಟಬೇಡ ಮುರಹರನ

Category: ಶ್ರೀಕೃಷ್ಣ

Author: ಕನಕದಾಸ

ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ||ಪ||
ಕಟ್ಟು ಮಾಡಿದ ಯಮನು ತನ್ನ ದೂತರಿಗೆ ||ಅ||

ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ
ಸಿರಿತುಳಸಿ ವನಮಾಲೆಯಿಂದೊಪ್ಪುವವರ
ತಿರುಮಂತ್ರ ತೀರ್ಥಪ್ರಸಾದಕೊಳಗಾದವರ
ತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ ||1||

ಬಡವರಾಗಲಿ ಭಾಗ್ಯವಂತರಾಗಲಿ ಅವರು
ಕಡು ಕರ್ಮಿ ಘೋರಪಾತಕರಾಗಲಿ
ನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರ
ಗೊಡವೆ ಬೇಡೆಂದು ಯಮಧರ್ಮ ಸಾರಿದನು ||2||

ವಾಸುದೇವನ ವಾಸರವನಾಚರಿಸುವವರ
ಬೇಸರಿಸದೆ ಹರಿಪ್ರಸಂಗ ಮಾಳ್ಪವರ
ಶೇಷಶಯನ ಕಾಗಿನೆಲೆಯಾದಿಕೇಶವನ
ದಾಸಾನುದಾಸರಿಗೆ ದಾಸರಾದವರ ||3||