ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ
Category: ಶ್ರೀಕೃಷ್ಣ
Author: ಕನಕದಾಸ
ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನು
ಮರೆಯದೆ ಸಲಹೆನ್ನ ವರದಾ ||ಪ||
ಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆ
ಪರಂದೇವಿ ವಲ್ಲಭನೆ ವರದಾ ||ಅ||
ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳು
ಹಂಬಲಿಸಿ ನಾ ಬಂದೆ ವರದಾ
ಅಂಬುಜೋದ್ಭವನ ಬರೆಹವ ಮೀರಲಾರದೆ ನರ
ಬೊಂಬೆ ಗರ್ಭದೊಳಿದ್ದೆ ವರದಾ ||1||
ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವ
ಸಂಭ್ರಮದೊಳಿದ್ದೆ ನಾ ವರದಾ
ಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈ
ಕುಂಭಿನಿಗೆ ನಾ ಬಂದೆ ವರದಾ ||2||
ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ
ಕುಶಲದಾಟವ ಕಲಿತೆ ವರದಾ
ಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮ
ತೃಷೆಗೆ ನಾನೊಳಗಾದೆ ವರದಾ ||3||
ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮ
ವಶನಾಗಿ ನಾನಿದ್ದೆ ವರದಾ
ಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನ
ಬಿಸುರುಹಾಕ್ಷನೆ ಕಂಚಿ ವರದಾ ||4||
ಗುರು ಹಿರಿಯರ ಕಂಡು ಸರಿಸಮಾನದಿ ನಾನು
ಬೆರೆದುಕೊಂಡಿದ್ದೆನೋ ವರದಾ
ನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿ
ನರನರಳಿ ಬೆಂಡಾದೆ ವರದಾ ||5||
ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯ
ಬೇಸರಿಸದೆ ಬೊಗಳಿದೆ ವರದಾ
ವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟ
ದೋಷಕನು ನಾನಾದೆ ವರದಾ ||6||
ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವು
ಕೊಂಚ ಗುಣಕೆಳೆಯುತಿದೆ ವರದಾ
ಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥ
ಪಂಚಪಾತಕನುಂಟೆ ವರದಾ ||7||
ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರ
ಪಂಚೆಯಲ್ಲಿರಿಸೆನ್ನ ವರದಾ
ಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರ
ಪಂಚವನು ಬಿಡಿಸೆನ್ನ ವರದಾ ||8||