ಯಮದೂತರಿನ್ನೇನು ಮಾಡುವರು ಪೇಳೊ
Category: ಶ್ರೀಕೃಷ್ಣ
Author: ಕನಕದಾಸ
ಯಮದೂತರಿನ್ನೇನು ಮಾಡುವರು ಪೇಳೊ
ರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ||ಪ||
ಮಂಡಲದೊಳಗೊಬ್ಬ ಜಾರಸ್ತೀಯಳು ತನ್ನ
ಗಂಡನರಿಕೆಯಿಂದ ವ್ಯಭಿಚಾರಗೈಯೆ
ಮಂಡಲಪತಿಯು ಶೋಧಿಸಿ ಹಿಡಿದೆಳೆತಂದು
ಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ ||1||
ಕಳವಿನ ಒಡವೆಯ ಒಡೆಯಗೆ ಪಾಲೀವ
ಕಳಬಂಟ ಕನ್ನವ ಕೊರೆಯುತಿರೆ
ಕಳವು ಮಾಡಿದನೆಂದು ಹಿಡಿದೆಳೆತಂದರೆ
ತಳವಾರನೇನು ಮಾಡುವನು ಕೇಳೆಲೊ ಹರಿ ||2||
ಮನವಚನದಲಿ ಮಾಡಿದ ಪಾಪ ಪುಣ್ಯಗಳ
ನಿನಗರ್ಪಿಸುವೆ ಕಾಲಕಾಲದಲಿ
ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವ
ಎನಗೆ ಆರೇನು ಮಾಡುವರು ಕೇಳೆಲೊ ಹರಿ ||3||