ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ
Category: ಶ್ರೀಕೃಷ್ಣ
Author: ಕನಕದಾಸ
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ- ಜಗ ||ಪ||
ದೇಕ ವಿಖ್ಯಾತ ಪಶ್ಚಿಮ ರಂಗಧಾಮ ||ಅ||
ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು
ರಮಣಿ ಭೂಮಿಯನು ತಂದಾಯಾಸವೂ
ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊ
ಕ್ಷಮೆಯನಳೆದೀ ಪಾದಕಮಲ ನೊಂದವೊ ||1||
ಪೊಡವಿಪಾಲಕರ ವಂಶವನು ವಪನ ಮಾಡಿ
ಕೊಡಲಿಯನು ಬಿಸುಟು ಮಲಗಿದ ಭಾವವೊ
ಮಡದಿಯನು ಕದ್ದೊಯ್ದವನ ಶಿರವನೆ ತರಿದು
ಒಡಲಿನಾಯಾಸದಲಿ ಪವಡಿಸಿದ ಪರಿಯೋ ||2||
ಖೂಳ ಶಿಶುಪಾಲಾದಿ ಎದುರಾಂತ ವೀರರ ಕೊಂದು
ಕಾಳಿಂಗದ ಹೆಡೆಯ ತುಳಿತುಳಿದು ಮೈಯಲಸಿತೊ
ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು
ಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ ||3||
ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ
ಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ
ಸಾಕಾರಿಯಾಗಿ ಗೌತಮ ಮುನೀಶ್ವರನಿಗೆ
ಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ ||4||
ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ
ನಿನ್ನನೆಬ್ಬಿಸುವವರನೊಬ್ಬರನು ಕಾಣೆ
ಉನ್ನಂತ ಕಾಗಿನೆಲೆಯಾದಿಕೇಶವರಾಯ
ಚೆನ್ನ ಶ್ರೀರಂಗಪಟ್ಟಣದ ರಂಗಧಾಮ ||5||