ರಮಣಿ ಕೇಳೆಲೆ ಮೋಹನ ಶುಭಕಾಯನ
Category: ಶ್ರೀಕೃಷ್ಣ
Author: ಕನಕದಾಸ
ರಮಣಿ ಕೇಳೆಲೆ ಮೋಹನ ಶುಭಕಾಯನ
ಅಮರ ವಂದಿತ ರವಿಶತಕೋಟಿ ತೇಜನ
ವಿಮಲ ಚರಿತ್ರದಿ ಮೆರೆವ ಶ್ರೀಕೃಷ್ಣನ
ಕಮಲವದನೆ ನೀ ತೋರೆ ||ಪ||
ಬಾಯೊಳಗಿಹಳ ಗಂಡನ ನಿಜ ತಮ್ಮನ
ತಾಯ ಪಿತನ ಮಡದಿಯ ಧರಿಸಿದನ
ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ
ದಾಯಾದಿಯ ಮಗನ
ಸಾಯಕವದು ತೀವ್ರದಿ ಬರುತಿರೆ ಕಂಡು
ಮಾಯಾಪತಿ ಭೂಮಿಯನೊತ್ತಿ ತನ್ನಯ
ಬೀಯಗನ ತಲೆಗಾಯಿದಂಥ
ರಾಯನ ಕರೆದು ತೋರೆ ||1||
ನಾಲಗೆ ಎರಡರವನ ಭುಂಜಿಸುವನ
ಮೇಲೇರಿ ಬಹನ ತಂದೆ ಇಹ ಗಿರಿಯನು
ಲೀಲೆಯಿಂದಲಿ ಕಿತ್ತೆತ್ತಿದ ಧೀರನ
ಕಾಳೆಗದಲಿ ಕೊಂದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವನಾಂತು ತನ್ನವರನು
ಪಾಲಿಸಿದಂಥ ದಾತನಹ ದೇವನ
ಲೋಲೆ ನೀ ಕರೆದು ತೋರೆ ||2||
ಉರಿಯೊಳು ಜನಿಸಿದವನ ನಿಜ ತಂಗಿಯ
ಸೆರಗ ಪಿಡಿದ ಖಳನಣ್ಣನ ತಂಗಿಯ
ವರನ ತಲೆಯನು ಕತ್ತರಿಸಿದ ಧೀರನ
ಗುರುವಿನೊಳುದಿಸಿದನ
ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಗಿರಿಯ ವೆಂಕಟಾದಿಕೇಶವನ
ಗರತಿ ನೀ ಕರೆದು ತಾರೆ ||3||