ರಾಜವದನೆ ಸುರರಾಜನ ಪುರದೊಳು

Category: ಶ್ರೀಕೃಷ್ಣ

Author: ಕನಕದಾಸ

ರಾಜವದನೆ ಸುರರಾಜನ ಪುರದೊಳು
ರಾಜಸುತಿಹ ಕುಜವ ||ಪ||
ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತ
ರಾಜನ ತೋರೆನಗೆ ||ಅ||

ನೆತ್ತಿಯಿಂದಿಳಿದಳ ಹೆತ್ತ ಮಗನಮೊಮ್ಮ
ನೆತ್ತಿದಾತನ ಪಿತನ
ತುತ್ತು ಮಾಡುವನ ವೈರಿಯನೇರಿ ಜಗವನು
ಸುತ್ತು ಬರುತಲಿಪ್ಪನ
ಕತ್ತಲೆಯೊಳು ಕಾದಿ ಅಳಿದಯ್ಯನ ಶಿರವ
ಕತ್ತರಿಸಿದ ಧೀರನ
ಸತ್ತ ಮಗನ ತಂದಿತ್ತವನನು ಎ
ನ್ನೊತ್ತಿಗೆ ಕರೆದು ತಾರೆ ||1||

ವರುಷವೈದರ ಪೆಸರವನ ತಾಯನುಜನ
ಧರಿಸಿದಾತನ ಸಖನ
ಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂ
ವರಗೆ ತಾನೊಲಿದವನ
ಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿ
ಹರಸಿ ದಾನವ ಕೊಂಡನ
ಧರಣಿಜಾತನ ಶಿರವರಿದು ನಾರಿಯರನು
ಪುರಕೆ ತಂದವನ ತೋರೆ ||2||

ಹನ್ನೆರಡನೆಯ ತಾರೆಯ ಪೆಸರಾಕೆಯ
ಕನ್ನೆಯಯ್ಯನ ಮನೆಯ
ತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯ
ಬಣ್ಣವ ಕಾಯ್ದಿಹನ
ಪನ್ನಗಶಯನ ಬೇಲಾಪುರದರಸನು
ತನ್ನ ನೆನೆವ ಭಕ್ತನ
ಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ
ಸನ್ನನ ತೋರೆನಗೆ ||3||