ತನುವ ನೀರೊಳಗದ್ದಿ
Category: ಶ್ರೀಕೃಷ್ಣ
Author: ಪುರಂದರದಾಸ
ತನುವ ನೀರೊಳಗದ್ದಿ ಫಲವೇನು
ಮನದಲಿ ದೃಢಭಕ್ತಿಯಿಲ್ಲದ ಮನುಜನು ||
ದಾನ ಧರ್ಮಂಗಳ ಮಾಡುವುದೆ ಸ್ನಾನ
ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ
ಹೀನ ಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನೋಡುವುದೆ ಸ್ನಾನ ||
ಗುರುಗಳ ಪಾದದರ್ಶನವೆ ಸ್ನಾನ
ಹಿರಿಯರ ದರ್ಶನ ಮಾಡುವುದೆ ಸ್ನಾನ
ಕರೆದು ಅನ್ನವನಿಕ್ಕುವುದೊಂದು ಸ್ನಾನ
ನರಹರಿ ಚರಣವ ನಂಬುವುದೆ ಸ್ನಾನ ||
ದುಷ್ಟರ ಸಂಗವ ಬಿಡುವುದೆ ಸ್ನಾನ
ಶಿಷ್ಟರ ಸಹವಾಸ ಮಾಡುವುದೆ ಸ್ನಾನ
ಸೃಷ್ಟಿಯೊಳಗೆ ಸಿರಿ ಪುರಂದರ ವಿಟ್ಠಲನ
ಮುಟ್ಟಿ ಭಜಿಸಿದರೆ ವಿರಜಾ ಸ್ನಾನ ||