ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ

Category: ಇತರೆ

Author: ಕನಕದಾಸ

ಲಟಪಟ ನಾ ಸಟೆಯಾಡುವೆನಲ್ಲ
ವಿಠಲನ ನಾಮ ಮರೆತು ಪೋದೆನಲ್ಲ ||ಪ||

ಶೇಷಗಿರಿಯ ಮೇಲೆ ಸವುತೆಯ ಬಿತ್ತಿ
ದೇವಗಿರಿಯ ಮೇಲೆ ಅವತಾರವಿಕ್ಕಿ
ಹಾಳೂರಿನೊಳಗೊಬ್ಬ ಕುಂಬಾರ ಸತ್ತ
ಗೋಕರ್ಣದೊಳಗೊಬ್ಬ ಪರದೇಶಿ ಅತ್ತ ||1||

ಆ ಸಮಯದಿ ಮೂರು ರಾಯರ ಕಂಡೆ
ಕುಪ್ಪುಸ ತೊಟ್ಟ ಕೋಳಿಯ ಕಂಡೆ
ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ
ನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ ||2||

ನುಸಿಯೊಂದು ರೊಟ್ಟಿಯ ಸುಡುವುದು ಕಂಡೆ
ಆಡೊಂದು ಮದ್ದಳೆ ಬಡಿವುದ ಕಂಡೆ
ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ
ಬಾಡದಾದಿಕೇಶವನ ಕಣ್ಣಾರೆ ಕಂಡೆ ||3||