ಲಾಲಿ ಪಾವನ ಚರಣ ಲಾಲಿ ಅಘಹರಣ
Category: ಶ್ರೀಕೃಷ್ಣ
Author: ಕನಕದಾಸ
ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ ||ಪ||
ವನಜಾಕ್ಷ ಮಾಧವ ವಸುದೇವತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪಭೂಜ
ಕನಕಾದ್ರಿನಿಲಯ ವೆಂಕಟರಾಯ ಜೀಯ ||1||
ಜಗದೇಕನಾಯಕ ಜಲಜದಳನೇತ್ರ
ಖಗರಾಜವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿವಿನುತ
ರಘುವಂಶಕುಲತಿಲಕ ರಮಣೀಯ ಗಾತ್ರ ||2||
ನಂದಗೋಪಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ ||3||
ಪಕ್ಷಿವಾಹನ ವಿಷ್ಣು ಪಾಹಿ ಪರಮೇಶ
ರಕ್ಷ ಕೌಸ್ತುಭಭೂಷ ವೈಕುಂಠವಾಸ
ಅಕ್ಷಯ ಫಲದಾತ ಅಖಿಳ ಲೋಕೇಶ
ಲಕ್ಷಣ ಪರಿಪೂರ್ಣ ಲಕ್ಷ್ಮೀಪ್ರಾಣೇಶ ||4||