ವನಜ ಮುಖಿಯರ ಮನದಿಷ್ಟಾರ್ಥವನೀವನ
Category: ಶ್ರೀಕೃಷ್ಣ
Author: ಕನಕದಾಸ
ವನಜ ಮುಖಿಯರ ಮನದಿಷ್ಟಾರ್ಥವನೀವನ- ಶ್ರೀ ಕೃಷ್ಣ ಎನ್ನಿರೊ
ಮನು ಮುನಿಜನರನು ಅನುದಿನರೊಳು ಪೊರೆವನ- ಶ್ರೀ ಕೃಷ್ಣ ಎನ್ನಿರೊ ||ಪ||
ಪಣ್ಣ ಕೊಯ್ದನನುಜಗೆ ಸಹಾಯನಾದನ- ಶ್ರೀ ಕೃಷ್ಣ ಎನ್ನಿರೊ
ಸಣ್ಣ ಸೀರೆಯ ನಲ್ವೆಣ್ಣು ರೂಪಾದನ- ಶ್ರೀ ಕೃಷ್ಣ ಎನಿರೊ
ಅಣ್ಣನ ವೈರಿಯ ಮಗನ ಕೊಂದಾತನ- ಶ್ರೀ ಕೃಷ್ಣ ಎನ್ನಿರೊ
ಬಣ್ಣಿಸಲರಿಯೆ ನಾನಿವನ ಮಹಿಮೆಯ- ಶ್ರೀ ಕೃಷ್ಣ ಎನ್ನಿರೊ ||1||
ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ- ಶ್ರೀ ಕೃಷ್ಣ ಎನ್ನಿರೊ
ಹೆತ್ತವಳಿರೆ ತಾಯ ಬೇರೆ ಪಡೆದಾತನ- ಶ್ರೀ ಕೃಷ್ಣ ಎನ್ನಿರೊ
ಮತ್ತೇಭಗಾಮಿನಿಗಾಗಿ ವನವಾಸ ಪೋದನ- ಶ್ರೀ ಕೃಷ್ಣ ಎನ್ನಿರೊ
ಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ- ಶ್ರೀ ಕೃಷ್ಣ ಎನ್ನಿರೊ ||2||
ಉಗುರು ಕೊನೆಗಳಿಂದ ನಗವನೆತ್ತಿದನ- ಶ್ರೀ ಕೃಷ್ಣ ಎನ್ನಿರೊ
ಬೊಗಸೆಗಂಗಳ ಬಾಲೆಯರ ತಂದಾತನ- ಶ್ರೀ ಕೃಷ್ಣ ಎನ್ನಿರೊ
ಮಗಳ ಗಂಡನ ಶಿರವನೆ ಛೇದಿಸಿದನ- ಶ್ರೀ ಕೃಷ್ಣ ಎನ್ನಿರೊ
ಸುಗುಣರನ್ನ ಕಾಗಿನೆಲೆಯಾದಿಕೇಶವನ- ಶ್ರೀ ಕೃಷ್ಣ ಎನ್ನಿರೊ ||3||