ತಲ್ಲಣಿಸದಿರು ಕಂಡ್ಯ
Category: ಶ್ರೀಕೃಷ್ಣ
Author: ಕನಕದಾಸ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ||
ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ |
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಘಟ್ಯಾಗಿ ಸಲಹುವನು ಇದಕೆ ಸಂಶಯಬೇಡ ||
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೋ |
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ||
ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲಿ ಆಹಾರವಿತ್ತವರು ಯಾರೋ ।
ಫುಲ್ಲಲೋಚನ ಕಾಗಿನೆಲೆಯಾದಿಕೇಶವನು
ಎಲ್ಲರನು ಸಲಹುವನು ಇದಕೆ ಸಂಶಯಬೇಡ ||