ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ

Category: ವೈರಾಗ್ಯ

Author: ಕನಕದಾಸ

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ||ಪ||
ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿ
ಮತ್ತನಾಗಿ ಬಲು ಕೃತ್ಯಗಳನು ಮಾಡಿ ||ಅ||

ಹರಿಯ ನೆನೆಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲ
ಪರಮ ಮೂಢರಲಿ ನಿರುತ ಸಂಗವ ಮಾಡಿ
ಗುರುಹಿರಿಯರ ದಯೆ ದೊರೆಯದೆ ಸುಮ್ಮನೆ ||1||

ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನ
ಶ್ವಾನಗಿಂತಲು ಬಲು ಮಾನಗೆಟ್ಟು ನಾ
ದೀನನಾಗಿ ಮನೆಮನೆಗಳ ತಿರುಗಿ ||2||

ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲ
ರಾಗರಂಗು ಭಕ್ತಿಭಾವದೊಳು
ಬೀಗಿ ಚೆನ್ನಕೇಶವನನು ನೆನೆಯದೆ ||3||