ಶೇಷಶಯನ ನಿನ್ನ ಪರಮ ಭಾಗವತರ
Category: ಶ್ರೀಕೃಷ್ಣ
Author: ಕನಕದಾಸ
ಶೇಷಶಯನ ನಿನ್ನ ಪರಮ ಭಾಗವತರ ಸಹ
ವಾಸದೊಳಿರಿಸು ಕಂಡ್ಯ ಎನ್ನದು ||ಪ||
ಬೇಸರಿಸದೆ ನಿನ್ನ ಹೃದಯಾಬ್ಬದೊಳಗಿರುವ
ದಾಸರೊಳಿರಿಸು ಕಂಡ್ಯ ಎನ್ನನು ||ಅ||
ತಂದೆಯೊಡಲನು ಸೀಳಿಸಿದವರೊಳು, ದೇ
ವೇಂದ್ರನ ತಲೆಗೆ ತಂದವರೊಳು, ದು
ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥ
ಬಾಂಧವರೊಳಗಿರಿಸು ಕಂಡ್ಯ ಎನ್ನನು ||1||
ತೋಯಜವೆಂಬ ಪುಷ್ಪದ ಪೆಸರವರೊಳು
ತಾಯ ಸೊಸೆಗೆ ಮಕ್ಕಳಿತ್ತವರೊಳು
ಆಯದಿ ದ್ವಾದಶಿ ವ್ರತವ ಸಾಧಿಸಿದಂಥ
ರಾಯರೊಳಿರಿಸು ಕಂಡ್ಯ ಎನ್ನನು ||2||
ಗಿಳಿನಾಯಿ ಪೆಸರಿನವರೊಳು, ಮುಗಿಲ
ಹೊಳೆಯ ಹೊಟ್ಟೆಲಿ ಹುಟ್ಟಿದವರೊಳು
ಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥ
ಹಳಬರೊಳಿರಿಸು ಕಂಡ್ಯ ಎನ್ನನು ||3||
ಅಂಕಕ್ಕೆ ರಥವ ನಡೆಸಿದವರೊಳು, ನಿ
ಶ್ಯಂಕೆ ಧರ್ಮವ ಗೆದ್ದ ಹಿರಿಯರೊಳು
ಲಂಕೆಯ ಅನುದಿನ ಸ್ಥಿರರಾಜ್ಯವಾಳಿದ
ಕಿಂಕರರೊಳಿರಿಸು ಕಂಡ್ಯ ಎನ್ನನು ||4||
ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿ
ಊಟವ ಬಯಸಿದಂತೆ ನಾ ಬೇಡಿದೆ
ನಾಟಕಧರ ನೆಲೆಯಾದಿಕೇಶವ, ನೀ
ನ್ನಾಟದೊಳಿರಿಸು ಕಂಡ್ಯ ಎನ್ನನು ||5||