ಸಂಸಾರ ಸಾಗರವನುತ್ತರಿಸುವಡೆ

Category: ಶ್ರೀಕೃಷ್ಣ

Author: ಕನಕದಾಸ

ಸಂಸಾರ ಸಾಗರವನುತ್ತರಿಸುವಡೆ
ಕಂಸಾರಿ ನಾಮವೊಂದೇ ಸಾಕು ಮರುಳೆ ||ಪ||

ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದು
ಸತತ ವ್ರತವ ಮಾಡುವೆನೆಂಬ ಹಮ್ಮು ಬೇಡ
ಶೃತಿಸ್ಮೃತಿಯರಿತು ನಡೆವೆನೆಂಬ ಚೇಷ್ಟೆಯು ಬೇಡ
ರತಿಪತಿಪಿತನ ನಾಮವೊಂದೆ ಸಾಕು ಮರುಳೆ ||1||

ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ
ವನಿತೆಯನು ಬಿಟ್ಟು ತಪವಿರಲು ಬೇಡ
ಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡ
ವನಜನಾಭನ ನಾಮ ನೆನೆ ಕಂಡ್ಯ ಮರುಳೆ ||2||

ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ
ತಾರ್ಥನಾದೆನೆಂಬುವ ಹೆಮ್ಮೆ ಬೇಡ
ಪಾರ್ಥಸಾರಥಿ ಕಾಗಿನೆಲೆಯಾದಿಕೇಶವನ
ಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ ||3||

(* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.)