ಸಜ್ಜನರ ಸಂಗದೊಳಗಿರಿಸೆನ್ನ ರಂಗ
Category: ಇತರೆ
Author: ಕನಕದಾಸ
ಸಜ್ಜನರ ಸಂಗದೊಳಗಿರಿಸೆನ್ನ ರಂಗ ||ಪ||
ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ||ಅ||
ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗ
ನಾಡಿನೊಳಗನ್ಯಾಯವ ಮಾಡುವನ ಸಂಗ
ಬೇಡಿದರು ಕೊಡದಿರುವ ಕಡುಲೋಭಿಯ ಸಂಗ
ಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ ||1||
ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗ
ಗುರು ನಿಂದೆ ಪರನಿಂದೆ ಮಾಡುವರ ಸಂಗ
ಪರಹಿತಾರ್ಥದ ಧರ್ಮವರಿಯದವರ ಸಂಗ
ಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ||2||
ಆಗಮದ ಅನ್ವಯವನರಿಯದವನ ಸಂಗ
ರೋಗದಲಿ ಆವಾಗಲು ಮುಲುಕುವವನ ಸಂಗ
ಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹ
ಭಾಗವತರ ಸಂಗ ಬಲು ಭಂಗ ಎಲೊರಂಗ ||3||