ಸಾಕು ಸಾಕಿನ್ನು ಸಂಸಾರ ಸುಖವು

Category: ವೈರಾಗ್ಯ

Author: ಕನಕದಾಸ

ಸಾಕು ಸಾಕಿನ್ನು ಸಂಸಾರ ಸುಖವು
ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ

ಉದಿಸಿದುವು ಪಂಚಭೂತಗಳಿಂದ ಓಷಧಿಗಳು
ಉದಿಸಿದುದು ಓಷಧಿಗಳಿಂದನ್ನವು
ಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡು
ಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ ||1||

ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ
ಪತನವಾದಿಂದ್ರಿಯವು ಹೊಲೆರುಧಿರವು
ಸತಿಯ ಉದರದೊಳೆರಡು ಏಕತ್ರ ಸಂಧಿಸುತ
ಪುತಪುತನೆ ಮಾಸ ಪರಿಯಂತ ಹರಿಯೆ ||2||

ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗ
ಮಾಸ ನಾಲ್ಕರಲಿ ಚರ್ಮದ ಹೊದಿಕೆ
ಮಾಸ ಐದಾರರಲಿ ನಖ ರೋಮ ನವರಂಧ್ರ
ಮಾಸ ಏಳರಲಿ ಧಾತು ಹಸಿವು ತೃಷೆಯು ||3||

ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ
ಗುಂಗಿನಲಿ ನಾನಿಂತು ಭವಭವದೊಳು
ಅಂಗನೆಯರುದರದಲಿ ಮತ್ತೆಮತ್ತೆ ಬಂದು
ಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ ||4||

ಇನಿತು ಗರ್ಭದೊಳು ನವ ಮಾಸ ಪರಿಯಂತರದಿ
ತನು ಸಿಲುಕಿ ನರಕದಲಿ ಆಯಾಸಗೊಂಡು
ಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದು
ಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ ||5||

ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿ
ಪರವಶದೊಳಿರಲು ನೀರಡಿಕೆಯಾಗಿ
ಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವ
ದುರಿತ ರೂಪದ ತನುವ ಧರಿಸಲಾರೆ ||6||

ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗ
ಹಸಿದನಿವನೆಂದು ಹಾಲನೆ ಎರೆವರು
ಹಸಿವು ತೃಷೆಯಿಂದಳಲು ಹಾಡಿ ತೂಗುವರಾಗ
ಪಶು ತೆರದಿ ಶಿಶುತನದೊಳಿರಲಾರೆ ಹರಿಯೆ ||7||

ನಡೆಯಲರಿಯದ ದುಃಖ ಮನಸಿನಲಿ ಬಯಸಿದುದ
ನುಡಿಯಲರಿಯದ ದುಃಖ ವಿಷಯದಿಂದ
ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು
ನುಡಿವ ಬಾಲ್ಯದೊಳಿರಲಾರೆ ಹರಿಯೆ ||8||

ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು
ಗೋಳಿಡುತ ವಿದ್ಯೆ ಕರ್ಮಗಳ ಕಲಿತು
ಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿ
ಬಾಲೆಯರ ಬಯಸಿ ಮರುಳಾದೆ ಹರಿಯೆ ||9||

ಜ್ವರದ ಮೇಲತಿಸಾರ ಬಂದವೊಲು ಯೌವನದಿ
ತರುಣಿಯೊಡನಾಟ ಕೂಟದ ವಿಷಯದಿ
ತರುಣಿ ಸುತರ್ಗನ್ನ ವಸ್ತ್ರಾಭರಣವೆನುತ
ಪರರ ಸೇವೆಯಲಿ ಘಾಡ ನೊಂದೆ ಹರಿಯೆ||10||

ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತು
ಜೊತೆಗಿಂದ್ರಿಯಗಳ ರೋಗ ರುಜಿನದಲಿ
ಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದ
ಕತ್ತಲೆಯೊಳೀ ದೇಹ ಕರಡಾಯಿತು ||11||

ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು
ಕಟ್ಟಿ ಕಾದಿಹರು, ಮುಪ್ಪಡಿಸಿದಾಗ
ತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತ
ಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ||12||

ಕಟ್ಟುನಿಟ್ಟಿನ ಭಾರಿ ಮೂಗುಬ್ಬಸದಿ ನೊಂದು
ಕಟ್ಟಳೆಯ ದಿನ ತುಂಬಿ ಮೃತವಾಗಲು
ಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳು
ಮುಟ್ಟರು ಹೆಣನೆಂದು ದೂರವಿಹರು ||13||

ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದು
ಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿ
ಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರು
ಮತ್ತೆ ಬುವಿಯಲಿ ಜನಿಸಲಾರೆ ಹರಿಯೆ ||14||

ಇನ್ನು ಈ ಪರಿಪರಿಯ ಯೋನಿ ಮುಖದಲಿ ಬಂದು
ಬನ್ನವನು ಪಡಲಾರೆ ಭವಭವದೊಳು
ಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿ
ಸನ್ಮತಿಯೊಳಿರಿಸೆನ್ನ ಆದಿಕೇಶವರಾಯ ||15||