ಸಾಧು ಸಜ್ಜನ ಸತ್ಯಗುಣಕಿದಿರುಂಟೆ
Category: ಶ್ರೀಕೃಷ್ಣ
Author: ಕನಕದಾಸ
ಸಾಧು ಸಜ್ಜನ ಸತ್ಯಗುಣಕಿದಿರುಂಟೆ
ಆದಿಕೇಶವನ ಪೋಲುವ ದೈವವುಂಟೆ ||ಪ||
ಸತ್ಯವ್ರತವುಳ್ಳವಗೆ ಮೃತ್ಯು ಭಯವುಂಟೆ
ಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆ
ವಿತ್ತವನರಸುವಂಗೆ ಮುಕ್ತಿಯೆಂಬುದುಂಟೆ
ಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1||
ಸುತಲಾಭಕಿಂತಧಿಕ ಲಾಭವುಂಟೆ
ಮತಿರಹಿತನೊಳು ಚತುರತೆಯುಂಟೆ
ಪತಿಸೇವೆಗಿಂತಧಿಕ ಸೇವೆಯುಂಟೆ
ಸತಿಯಿಲ್ಲದವಗೆ ಸಂಪದವೆಂಬುದುಂಟೆ ||2||
ಪಿಸುಣಗಿನ್ನಧಿಕ ಹೀನನುಂಟೆ
ವಸುಧೆಯೊಳನ್ನದಾನಕೆ ಸರಿಯುಂಟೆ
ಅಶನವ ತೊರೆದ ಯೋಗಿಗೆ ಭಯವುಂಟೆ
ವ್ಯಸನಿಯಾದ ನೃಪನಿಗೆ ಸುಖವುಂಟೆ ||3||
ಧನಲೋಭಿಗಿನ್ನಧಿಕ ಹೀನನುಂಟೆ
ಮನವಂಚಕ ಕಪಟಿಗೆ ನೀತಿಯುಂಟೆ
ಸನುಮಾನಿಸುವ ಒಡೆಯಗೆ ಬಡತನವುಂಟೆ
ವಿನಯವಾಗಿಹ ಸಂಗದೊಳು ಭಂಗವುಂಟೆ ||4||
ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆ
ಪರಮ ಸಾತ್ತ್ವಿಕ ಗುಣಕೆ ಪಿರಿದುಂಟೆ
ಪರನಿಂದೆಗಿಂತಧಿಕ ಪಾತಕವುಂಟೆ
ವರದಾದಿಕೇಶವನಲ್ಲದೆ ದೈವವುಂಟೆ ||5||