ಸಿರಿಯ ಮದವೆ ಮುಕುಂದ

Category: ಶ್ರೀಕೃಷ್ಣ

Author: ಕನಕದಾಸ

ಸಿರಿಯ ಮದವೆ ಮುಕುಂದ- ನಿನ್ನ
ಚರಣ ಸೇವಕನ ಬಿನ್ನಹ ಪರಾಕೆಲೊ ದೇವ ||ಪ||

ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠ
ಪಟ್ಟಣವು, ಸಿರಿಯೋಲಗವ ನಿತ್ಯದಿ
ಕಟ್ಟಿ ಓಲೈಸುರಿಹ ದಾಸರನಿಮಿಷರು, ಮನ
ಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ ||1||

ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿ
ಯಕುತಿಯೊಳು ಲೋಕಗಳ ಸೃಜಿಸುವಂಥ
ಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೊ
ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ ||2||

ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯ
ದಲ್ಲಣನೆಂಬ ಬಿರುದು ಸಾಹಸ
ಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನ
ಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ? ||3||

ಶೇಷ ಹಾಸು ಮಂಚವು, ಗರುಡ ತುರಗವು, ಪೀತ
ವಾಸದುಡುಗೆಯು, ಕೊರಳಲಿ ವೈಜಯಂತಿ
ಮೀಸಲಳಿಯದ ಪುಷ್ಪ ಮಾಲೆಗಳ ಧರಿಸಿ ಜಗ
ದೀಶನೆಂಬುವ ಬಿರುದ ಹೊಗಳಿಸಿಕೊಳುವ ||4||

ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆ
ಶಕ್ತ ಎನ್ನನು ಕಾಯೋ ಸುಲಭದಿಂದ
ಮುಕ್ತಿಯನು ಪ್ರಕಟಿಸಲು ಲೋಕದೊಳು ಭಜಕರ್ಗೆ
ಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ ||5||