ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

Category: ಶ್ರೀಕೃಷ್ಣ

Author: ಕನಕದಾಸ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ
ಹರಿ ಮಧ್ಯೆ ಹರಿಗಮನೆ ||ಪ||

ಹರಿಯ ನಂದನ ಸಖನೆನಿಪ ಅಹೋಬಲದ
ಹರಿಯ ನೀ ತಂದು ತೋರೆ ||ಅ||

ಎರವಿನ ತಲೆಯವನಣ್ಣನಯ್ಯನ
ಪರಮ ಸಖನ ಸುತನ
ಹಿರಿಯಣ್ಣನಯ್ಯನ ಮೊಮ್ಮನ ಮಾವನ
ತರಿದೊಟ್ಟಿದನ ಹಗೆಯ
ಗುರುವಿನ ಮುಂದೆ ಮುಂದಿಹ ಬಾಹನ
ಕಿರಿಯ ಮಗನ ರಾಣಿಯ
ದುರುಳತನದಿ ಸೆಳೆದುಕೊಂಡನ ಕೊಂದನ
ತರಳೆ ನೀ ತಂದು ತೋರೆ ||1||

ಸೋಮನ ಜನಕನ ಸತಿಯ ಧರಿಸಿದನ
ರೋಮ ಕೋಟಿಯೊಳಿಟ್ಟಿಹನ
ಕಾಮಿನಿ ಸತಿಯ ಕಂದನ ತಮ್ಮಗೊಲಿದನ
ಭಾಮೆ ನೀ ತಂದು ತೋರೆ ||2||

ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯ
ಪಥದೊಳು ತಿರುಗಿದನ
ಅತಿಶಯ ನರಹರಿ ವಾಮನ ರೂಪಿನ
ಪಿತನ ಮೋಹದ ರಾಣಿಯ ||3||

ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತು
ಪತಿವ್ರತೆಯರ ಭಂಗಿಸಿ
ಕ್ಷಿತಿಯೊಳು ರಾವುತನಾದ ಬಾಡ
ದಾದಿಕೇಶವನ ತಂದು ತೋರೆ ||3||