ಹಿಂಗದೆ ಮನದಣಿಯ ರಂಗನ ಭಜಿಸೊ
Category: ಶ್ರೀಕೃಷ್ಣ
Author: ಕನಕದಾಸ
ಹಿಂಗದೆ ಮನದಣಿಯ ರಂಗನ ಭಜಿಸೊ ||ಪ||
ರಂಗನ ಭಜಿಸೊ ಕೃಷ್ಣನ ಭಜಿಸೊ ||ಅ||
ಯಾತಕೆ ಸುಮ್ಮನಿರುವೆ
ಪಾತಕ ಹೆಚ್ಚಿ ಮೆರೆವೆ
ನೀತಿಯ ತಪ್ಪಿ ನೀನಿರುವೆ
ಭೂತಳ ಭೋಗ ಸ್ಥಿರವೆ ||1||
ಗೆಜ್ಜೆಯ ಕಟ್ಟಿ ಆಡೊ
ಲಜ್ಜೆಯ ಬಿಟ್ಟು ಪಾಡೊ
ಮುಜ್ಜಗನ ಕೊಂಡಾಡೊ
ಸಜ್ಜನರ ಜೊತೆಗೂಡೊ ||2||
ಪನ್ನಗರಾಜಶಯನನ
ಪನ್ನಗಭೂಷಣ ನುತನ
ಉನ್ನಂತ ಗುಣದವನ
ಚೆನ್ನಾದಿಕೇಶವನ ||3||