ಹೂವ ತರುವರ ಮನೆಗೆ ಹುಲ್ಲ ತರುವೆ
Category: ಶ್ರೀಕೃಷ್ಣ
Author: ಕನಕದಾಸ
ಹೂವ ತರುವರ ಮನೆಗೆ ಹುಲ್ಲ ತರುವೆ ||ಪ||
ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ||ಅ||
ಈರೇಳು ಜನ್ಮದಿಂ ದಾಸನಾಗಿಹೆ ನಾನು
ಸೇರಿದೆನೊ ತವ ಶರಣರ ಸೇವೆಗೆ
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ
ನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ||1||
ರಂಗನಾಥನೆ ನಿನ್ನ ಡಿಂಗರಿಗನೋ ನಾನು
ಡಂಗುರವ ಹೊಯಿಸಯ್ಯ ದಾಸನೆಂದು
ಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟು
ಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು ||2||
ಎಷ್ಟು ಮಾಡಲು ನಿನ್ನ ಬಂಟನೋ- ವೈಷ್ಣವರ
ಹುಟ್ಟು ದಾಸಿಯ ಮಗನು ಪರದೇಶಿಯೋ
ಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ- ಕೈ
ಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ||3||