ಹ್ಯಾಂಗೆ ನೀ ದಾಸನಾದೆ ಪ್ರಾಣಿ

Category: ವೈರಾಗ್ಯ

Author: ಕನಕದಾಸ

ಹ್ಯಾಂಗೆ ನೀ ದಾಸನಾದೆ ಪ್ರಾಣಿ ||ಪ||

ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳು
ಮಂಗನಂದದಲಿ ಭವ ಭಂಗವ ಪಡುವವನು ||ಅ||

ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲ
ದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ||1||

ತನುವು ತನ್ನದು ಎಂದು ತನಯ ಮಾನಿನಿಯರೆ
ತನಗೆ ಗತಿಯೆಂದು ನಂಬಿರುವ ಮೂಢನೆ ||2||

ಕಾಲನ ದೂತರು ಕರುಣಸಂಪನ್ನರೆ
ಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ ||3||

ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿ
ಗೆಲುವಿನಿಂದಲಿ ಮೂಲ ಮಲವನಳಿಯದೆ ||4||

ಉದರಪೋಷಣೆಗಾಗಿ ಅಧಮರ ಯಾಚಿಸುತ
ಮದಗರ್ವವೆಂಬುವುದ ಬದಿಯಲ್ಲಿ ಇಟ್ಟುಗೊಂಡು ||5||

ಹಿರಿಯರ ನಿಂದಿಸಿ ಹರಿದಾಸನೆನಿಸಿದೆ
ಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ ||6||

ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿ
ಶ್ರೀಲೋಲನ ಗುಣ ಪೊಗಳಿ ನಟಿಸದಲೆ ||7||

ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆ
ಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ ||8||

ವೇದಶಾಸ್ತ್ರಗಳನು ಮೋದದಿಂದೋದದೆ
ಬಾದರಾಯಣಕೃತ ಭಾಗವತ ಕೇಳದೆ ||9||

ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ
ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು ||10||

ನೇಮದಿ ಉಪವಾಸ ಆ ಮಹಾ ಏಕಾದಶಿ
ಕಾಮಜನಕನನು ಪ್ರೇಮದಿ ಸ್ಮರಿಸಿದೆ ||11||

ಏಸುದಿನ ಬದುಕಿದರು ಸೂಸುವ ಪಾಪವ
ಈಸಿ ದಾಟದೆ ಕಾಸುವೀಸಕೆ ಬಾಳಿದವ ||12||

ಅಂಗಳದೊಳಡಗಿಪ್ಪ ಸುಮಂಗಳ ಮೂರ್ತಿ ಪಾ
ದಂಗಳ ಮನದಲಿ ಹಿಂಗದೆ ಭಜಿಸದೆ ||13||

ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆ
ಅತ್ತರೆ ಬಹುದೇನೊ ಉತ್ತಮ ಫಲ ಸೂಸಿ ||14||

ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯ
ಬೇಡಿದರೆ ಕೊಟ್ಟು ಕೂಡಿ ಆಡದವನು ನೀ ||15||

ಶೃಂಗಾರ ಬಯಸುತ ಬಂಗಾರದೊಡವೆಯ
ಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ ||16||

ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿ
ಚಿತ್ತಜನಯ್ಯನು ದೊರೆವ ಬಗೆ ಕಾಣದೆ ||17||

ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆ
ಹಂಬಲಿಸಿದರಿನ್ನು ಬೆಂಬಲಕಾರುಂಟು ||18||

ದುಂಡು ನಾಮವ ಬಳಿದು ಭಂಡತನದಲಿ ಜಗದಿ
ದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ ||19||

ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆ
ಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ ||20||

ಭೋಗಿಶಯನನ ಪಾದ ರಾಗದಿ ಭಜಿಸದೆ
ಕಾಗಿನೆಲೆಯಾದಿಕೇಶವರಾಯನೆನದೆ ||21||