ತಾಯಿ ದುರ್ಗೆಯ ನಿಜವನರಿಯುವ
Category: ಶ್ರೀದೇವಿ
Author: ವಚನವೇದ
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು |
ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು ||
ಯೋಗಿಹೃದಯದ ದಿವ್ಯನಿತ್ಯಾನಂದರೂಪಿಣಿ ಆಕೆಯು |
ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು ||
ಸಕಲಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು |
ಮೂಲಾಧಾರ ಸಹಸ್ರಾರದಿ ಮುನಿಗಳವಳನು ನೆನೆವರು ||
ಶಿವನ ಹೊರಕತಿನ್ನಾರು ಅರಿಯರು ಅವಳ ದಿವ್ಯಸ್ವರೂಪವ |
ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ ||
ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ |
ಇಂಥ ತಾಯಿಯ ತಿಳಿದೆನೆಂದರೆ ಶ್ರೀಪ್ರಸಾದನು ನಗುವನು ||
ಕುಬ್ಜನಾದವ ಮುಗಿಲಚಂದ್ರನ ಹಿಡಿವ ಯತ್ನದ ತೆರದಲಿ |
ಬುದ್ದಿಯರಿತರು ಹೃದಯವರಿಯದು ತಾಯಿ ದುರ್ಗೆಯ ನಿಜವನು ||