ಅಪ್ಪನ ನೋಡಿರೊ ವರಗಳ
Category: ಶ್ರೀಕೃಷ್ಣ
Author: ವಿಜಯದಾಸ
ಅಪ್ಪನ ನೋಡಿರೊ ವರಗಳ
ತಪ್ಪದೆ ಬೇಡಿರೋ
ಸರ್ಪನಮೇಲೆ ಉಪ್ಪವಡಿಸಿ
ಮುಪ್ಪು ಇಲ್ಲದೆ ಭಕ್ತರನ ಪೊರೆವಾ
ಇಂದ್ರ ನೀಲಿದ ರತನೋ ಕಾಂತಿ ಚಂದ್ರಬಿಂಬ ವದನೋ
ಚಂದ್ರಿಕೆಯ ಪೋಲಿಪ ಮುಖವೊ
ಬಲುವಾ ನಂದಗಡಲ ಸುಖವೊ
ಮುಂದಿನ ಬೆಳಸುವ ಮಿಂಚೋ
ತೂಗುವ ಸುಳಿಗುರುಳ ಚುಂಚೊ
ಒಂದೊಂದೊ ದಕ್ಕನಂತಾದ
ಸುಂದರದವತಾರ ಮಂದರಧರನೋ ||1||
ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು
ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ
ಎರಳಿಯ ಗಂಗಳೋ ನೊಸುಲಲಿ
ತಿಲಕಾಂಬರದ ಬಿದಿಗೆ ತಿಂಗಳೊ
ಪರಿಪರಿ ನಗೆ ಸಾವಿರ ಮಿಹಿರನಂತೆ
ಕಿರಣವ ಮಿಗೆ ಮಕರ ಕುಂಡಲವೊ ||2||
ಬಿಲ್ಲು ಬಾಗಿದ ಪುಬ್ಬೊ ಮುಡಿಯಲಿ ಕುಸುಮ ವನದ ಹಬ್ಬೊ
ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ
ಬಲು ಚನ್ನೊ ಪಲ್ಲು ಪಂಙ್ತಗೆ ಹಾಕಿದ ಕರಿಯು
ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ
ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು ||3||
ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು
ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ
ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ
ಏಳು ಗೂಳಿಯ ನಯತೋಳಿಲಿ ಬಿಗಿದ
ಬಾಲಲೋಲ ಗೋಪಾಲನೊ ||4||
ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ
ಚಿನ್ನದ ಸರವೊ ರೇಶಮಿಗೊಂಡೆ ಕೌಸ್ತುಭ ಶೃಂಗಾರವೊ
ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ
ಅಣ್ಣಣ್ಣ ಹೊನ್ನಿನ ಗುಬ್ಬಿ ಎನುತ ಗೋಪಿ ಮನ್ನಿಸುತಲಿ ||5||
ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ
ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ
ಪೊಳೆವ ಪವಳವೊ ಪೋಣಿಸಿಯಿದ್ದ ವೈಜಯಂತಿ ಸುಳ್ಳುವೊ
ನಲಿನಲಿನಲಿದು ವಲಿದಾದೆನುತ
ಒಲಿಸಿದಳೊ ಮಗನ ಯಶೋದೆ ||6||
ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ
ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು
ಅಂಬಿನ ತೆರೆಯು ಯೆನಲು ಮಿನುಗುವ
ಬಿಸಲಿನ ಘನ ಹರಿಯು
ಭೊಂ ಭೊಂ ಭೊಮೆಂದು ಕೊಂಬಿನ ಊದು
ಎಂಬೊ ನುಡಿಯಲಿ ರಂಬಿಸಿ ಕೃಷ್ಣನ ||7||
ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ
ಅಮಮ ಧೊರೆಯು ನಾದದ ಘಂಟ್ಯೊ
ಮಣಿಶಿಂಗನ ಮರಿಯು
ಸಮಸಮವಾತೊಡೆ ಬಾಳಿಯ ಸ್ತಂಭೊ
ಜಾನು ಕನ್ನಡಿ ಕ್ರಮವೊ
ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ ||8||
ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ
ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ
ಸಾಲಾಂಗುಲಿಯು ವೀರ ಮುದ್ರಿಕೆ ನಖ ಕೇದಿಗೆ ಮುಳೆಯು
ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ ||9||
ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ
ಹರಿಹರಿ ಎಂದು ಹರದಾಡುತಲಿ
ಪರಿಪರಿಯಿಂದ ಮಾತನು ಅಪ್ಪನೆ ಸರಿಯಾಗಿ ಕುಣಿಯೆಂದು
ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ
ತರಕಿಸಿ ಸಂತತ ಉಡಿಯಲಿ ಎತ್ತಿ ||10||