ಅರಿವರಿಗಿಲ್ಲೆ ಹರಿಪುರವೊ | ಹರದಾರಿ

Category: ಶ್ರೀಕೃಷ್ಣ

Author: ವಿಜಯದಾಸ

ಅರಿವರಿಗಿಲ್ಲೆ ಹರಿಪುರವೊ | ಹರದಾರಿ
ಕೂಗಳತಿ ಎಂಬೊ ಸಂಶಯಸಲ್ಲಾಪ
ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು |
ಕುಮತ ಮತವನು ವದ್ದು | ಬಲು ಉಬ್ಬೆದ್ದು |
ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು |
ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ||1||

ಭಾಗವತರ ನೋಡಿ | ವೇಗ ಮನಸನು ಮಾಡಿ |
ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ |
ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ ||2||

ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು |
ಹರಿಕಥಾ ಬೇಕು | ಹರಿ ಎನಲಿ ಬೇಕು |
ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು |
ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ ||3||

ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು |
ಕ್ಲೇಶವನು ಅಳಿದು | ತೋಷದಲಿ ಬೆಳೆದು |
ದೋಷರಾಶಿಗೆ ಮುಳಿದು | ದೂಷಕರನೆ ಅಳಿದು |
ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ ||4||

ಆಚಾರವನು ಪಿಡಿದು | ಸೂಚನೆ ಅರಿತು ನಡೆದು |
ವಾಚಗಳ ಮಿತಿ ನುಡಿದು | ನಾಮಗುಡಿದು |
ನಾಚಿಕೆಯ ತೊರೆದು | ಸಿರಿ ವಿಜಯವಿಠ್ಠಲರೇಯನ |
ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ||5||