ಆವ ಪರಿಯಲಿ ಹರಿಯ ವೊಲಿಸು

Category: ಶ್ರೀಕೃಷ್ಣ

Author: ವಿಜಯದಾಸ

ಆವ ಪರಿಯಲಿ ಹರಿಯ ವೊಲಿಸು
ಈ ಉಪಾಯವು ತೋರಿ ಕೊಡುವೆನು

ಉದಯದಲಿ ಎದ್ದೀಗ ಊರ ವಾರ್ತಿಯ ಬಿಟ್ಟು
ಮುದದಿಂದ ವೃಂದಾವನ ಸೇವಿಸಿ
ವದನದಲಿ ಶ್ರೀ ಹರಿಯನಾಮ ಗುಣಕಥೆಗಳನು
ಪದೋಪದಿಗೆ ಪಾಡಿ ಕೊಂಡಾಡು ನಲಿದಾಡು ||1||

ಆಮೇಲೆ ದೇವರೆಡೆ ರಂಗವಾಲಿಯನಿಕ್ಕಿ
ಕಾಮುಕನಾಗದಲೆ ಸ್ನಾನ ಸಂಧ್ಯಾ
ನೇಮ ನಿತ್ಯವ ಮುಗಿಸಿ ದೇವತಾ ಪೂಜೆಗೈದು
ಪ್ರೇಮದಿಂದಲಿ ದಾನ ಕರದಲ್ಲಿ ಮಾಡೊ ||2||

ಮಂಗಳ ಮೂರುತಿಯ ಅಂತರಂಗದಿ ನಿಲಿಸಿ
ಶೃಂಗಾರದುಡಿಗೆ ಇಡಿಗಿಯನು ತೊಡಿಸಿ
ಮಂಗಳಾರುತಿ ಬೆಳಗಿ ಮನದಲ್ಲಿ ನಲಿನಲಿದು
ಕಂಗಳಿಂದಲಿ ನೋಡು ಹರಿಯ ಕೂಡಾಡು ||3||

ಮೂಲ ಗುಣ ಅವತಾರ ಮಹಿಮೆ ಮಹ ಉನ್ನತ
ಲೀಲೆ ವಿನೋದ ಅತಿ ಆಶ್ಚರ್ಯವ
ವ್ಯಾಳವ್ಯಾಳೆಗೆ ಪೋಗಿ ಉತ್ತಮ ಜ್ಞಾನಿಗಳಿಂದ
ಕೇಳು ಕರ್ಣದಲಿ ಪರಮ ಹರುಷದಲೆ||4||

ಹರಿಚರಣಕ್ಕೇರಿಸಿದ ಶಿರಿ ತುಲಸಿ ಚಂಪಕ
ವರ ಜಾಜಿ ಮಲ್ಲೆ ಮಲ್ಲಿಗೆ ಕ್ಯಾದಿಗೆ
ಪರಿಪರಿ ಗಂಧ ಚಂದನ ದಿವ್ಯ ಪರಿಮಳ
ಸರಕು ನಾಶಿಕದಲ್ಲಿ ಕೊಳ್ಳು ಸುಖ ಬಾಳು ||5||

ಅಶಿವರುಣ ಮಧ್ಯ ತ್ರಿವೇಣಿ ವಿಷ್ಣುಪಾದ
ಎಸೆವ ಕುರುಕ್ಷೇತ್ರ ಅಯೋಧ್ಯ ಮಾಯಾ
ವೃಷಭ ಗಿರಿ ಶ್ರೀರಂಗ ಕಂಚಿ ಮೊದಲಾಗ್ಯುಳ್ಳ
ಹೆಸರಾದ ಪುಣ್ಯನಿಧಿ ಮಟ್ಟು ದುರಿತವ ಕುಟ್ಟು||6||

ಬೇಸರದಲೀಪರಿಚರಿಸಿದರೆ ಜನನಾದಿ
ನಾಶನವ ಮಾಡಿ ನಾರದವರದನು
ದಾಸ ಪುರಂದರಗೆ ವೊಲಿದಂತೆ ವಿಜಯವಿಠ್ಠ
ಲೇಶ ವೆಂಕಟ ನಿನಗೆ ಪರಮ ಪದವೀಯನೀವ ||7||