ಈಶಾ ಕೈಲಾಸವಾಸಾ
Category: ಶ್ರೀಶಿವ
Author: ವಿಜಯದಾಸ
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ |
ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ
ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ |
ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ ||
ಶಿವ ಓಂ ನಮಃ ಶಿವ | ಸವಚರಣ ನೋಡುವ |
ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ ||1||
ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ |
ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ ||
ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು |
ತುತಿಪ ಗತಿಗೆ ರಘು | ಪತಿನಾಮ ಎನಗೀಯೋ ||2||
ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ |
ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ ||
ಭಯ ನಿವಾರಣ ಸಿರಿ | ವಿಜಯವಿಠ್ಠಲನ |
ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ ||3||