ಉದ್ದರುಸುವದೆನ್ನ ಉದಧಿಶಯನ

Category: ಶ್ರೀಕೃಷ್ಣ

Author: ವಿಜಯದಾಸ

ಉದ್ದರುಸುವದೆನ್ನ ಉದಧಿಶಯನ |
ಬಿದ್ದೆ ನಿನ್ನಯ ಪಾದ |
ಪದ್ಮದ್ವಯಕೆಯಿಂದು

ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ |
ನಿಂದರದೆ ಸಂಚರಿಸಿ ಪುಣ್ಯವೆಲ್ಲಾ |
ತಂದು ನಿನಗರ್ಪಿಸಿದೆ ಕೈ ಕೊಂಡು |
ಮುಂದೆ ಎನ್ನಗೊಂದು ದಾರಿಯ
ತೋರು ತಡಮಾಡದಲೆ ದೇವಾ ||1||

ಯಾತರವ ನಾನು ನರಮನೆ ಗಾಯಕರ
ದೂತರೆಂಜಲನುಂಡು ಬೆಳದ ನರನೋ ||
ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ |
ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ||2||

ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು |
ಕೃಷ್ಣಾ ಸ್ನಾನ ಕೃಷ್ಣ ಸಂದರುಶನಾ |
ಕೊಟ್ಟು ಕೇವಲವಾಗಿ ನಿನ್ನಂಘ್ರಿಯಲಿ ರತಿ |
ಇಟ್ಟು ಭಜಿಸುವಂತೆ ಭಾಗ್ಯವನು ಕೊಡೊವೇಗಾ||3||

ಏನು ಕಡಿಮೆ ನೀನು ಒಲಿದರಾದಡೆ ರಾಮ |
ಧೇನು ತರುಮಣಿ ಬಾರದೆ ನಿಲ್ಲವೇ ||
ಶ್ರೀನಿವಾಸನೆ ನಿನ್ನ |
ನಂಬಿದ ಪಾಪಿಗೆ ಹಾನಿಯಲ್ಲದೆ
ಲೇಶ ಸುಖವು ತೋರದು ದೇವಾ ||4||

ವೆಂಕಟಗಿರವಾಸಾ ವೇದ ವಂದಿತ ಚರಣಾ |
ಶಂಖ ಚಕ್ರಪಾಣಿ ಕರುಣಾಕರಾ |
ಶಂಖಾಣ ನೃಪವರದ ವಿಜಯವಿಠ್ಠಲ ತಿಮ್ಮ
ಅಂಕದ ಮೇಲಾಡುವ ಬಾಲನೆಂದು ಬಿಡದೆ ||5||