ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ
Category: ಶ್ರೀಕೃಷ್ಣ
Author: ವಿಜಯದಾಸ
ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ |
ಅಂತರಾತ್ಮಕ ಪೇಳು ಎನಗೊಂದು ಹದನಾ
ವೇದಶಾಸ್ತ್ರವನು ಅರಿಯೆ |
ಪುರಾಣ ಪುಣ್ಯಕಥೆ |
ಓದಲಿನ್ನರಿಯೆನೊ ಎಂದೆಂದಿಗೂ |
ಭೇದ ಭೇದವನರಿಯೆ |
ಬಾಗಿ ನಮಿಸುವದನರಿಯೇ |
ಆದರಣಿ ಅರಿಯೆ ಆರಾಧಿನಿಯನರಿಯೆ||1||
ಜ್ಞಾನ ಭಕುತಿಯನರಿಯೆ |
ಗಮನ ತೀರ್ಥವನರಿಯೆ |
ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ |
ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ |
ಗಾನವನು ಅರಿಯೆ ಗತಿಮತಿಗಳನು ನಾನರಿಯೆ ||2||
ಭೂತದಯವನು ಅರಿಯೆ |
ಬುದ್ಧಿ ಪೂರ್ವಕವರಿಯೆ |
ಯಾತರ ಸೇವಿ ಅರಿಯೆ ಏನು ಅರಿಯೆ |
ದಾತಾರ ಜಗದೇಕ |
ನಾಥ ವಿಜಯವಿಠ್ಠಲ ಪ್ರೀತಿಯಲಿ
ನಿನ್ನ ನಾಮವನುಣಿಸಿಕಾಯೊ ||3||