ದಾಸನ ಮಾಡಿಕೊ ಎನ್ನ

Category: ಶ್ರೀಕೃಷ್ಣ

Author: ಪುರಂದರದಾಸ

ದಾಸನ ಮಾಡಿಕೊ ಎನ್ನ - ಸ್ವಾಮಿ
ಸಾಸಿರನಾಮದ ವೆಂಕಟರಮಣ ||

ದುರುಬುದ್ದಿಗಳನೆಲ್ಲ ಬಿಡಿಸೋ - ನಿನ್ನ
ಕರುಣಕವಚವೆನ್ನ ಹರಣಕೆ ತೊಡಿಸೋ |
ಚರಣಸೇವೆ ಎನಗೆ ಕೊಡಿಸೋ - ನಿನ್ನ
ಕರಪುಷ್ಪವನೆನ್ನ ಶಿರದಲಿ ಮುಡಿಸೋ ||

ದೃಢಭಕ್ತಿ ನಿನ್ನಲ್ಲಿ ಬೇಡಿ - ನಾ -
ನಡಿಗೆರಗುವೆನಯ್ಯ ಅನುದಿನ ಪಾಡಿ |
ಕಡೆಗಣ್ಣಲೇಕೆನ್ನ ನೋಡಿ - ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ||

ಮರೆಹೊಕ್ಕವರ ಕಾವ ಬಿರುದು - ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು |
ದುರಿತಗಳೆಲ್ಲವ ತರಿದು - ಸಿರಿ
ಪುರಂದರವಿಟ್ಠಲ ಎನ್ನನು ಪೊರೆದು ||