ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ

Category: ಶ್ರೀಕೃಷ್ಣ

Author: ವಿಜಯದಾಸ

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ
ಕೊಡು ಎನಗೆ ದೃಢ ಪದವಿ ಕಡಲಶಯನಾ

ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ
ಅತಿ ರೋಷದಿಂದವನ ಹೊಯಿದೆಬ್ಬಿಸೆ
ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು
ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ ||1||

ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ
ವಿಂದ ನಾರಾಯಣ ಕೃಷ್ಣ ವಿಷ್ಣು
ಇಂದಿರಾರಮಣ ಇನಕುಲತಿಲಕ
ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ||2||

ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ
ಜಾತಿ ವಧುವಿಗೆ ಸೋತು ಕೆಟ್ಟು ಯಮನ
ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ
ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ ||3||

ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು
ಮನದ ಖೇದವ ತಾಳಿ ಹರಿದು ಬಿಸುಟೆ
ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು
ಪುನರ್ವಸು ಸ್ಥಾನವು ಕೊಡಲಿಲ್ಲವೆ||4||

ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು
ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ
ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು
ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ ||5||


ಸೋದರಗೆ ಬುದ್ದಿಯನು ಪೇಳೆ
ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ
ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ
ಆ ದಿನಪ ಶಶಿವುಳ್ಳ ಪರಿಯಂತ ಕೊಡಲಿಲ್ಲವೆ ||6||

ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ
ವಿತ್ತಾದಿ ದಾನಗಳು ಮಿತಿಯಿಲ್ಲದೇ
ಅತ್ಯಂತ ಕೊಡುವವನ ಮೂರು ಪಾದವ ಬೇಡಿ
ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ ||7||

ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ
ಮಾನ ಭಂಗವ ಮಾಡಿ ಸುಲಿವುತಿರಲು
ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ
ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ||8||

ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ
ನಡುಗುತಲಿ ನಿನ್ನ ಪಟ್ಟಣಕೆ ಬರಲು
ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ
ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ ||9||

ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ
ಗುರುದಕ್ಷಿಣವ ಬೇಡೆ ಸಾಂದೀಪನು
ಭರದಿಂದ ಪೋಗಿ ಕೃತಾಂತನೊಳು ಭೂ
ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ ||10||

ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ
ಭಜಿಸಿದರವರು ತಮ್ಮ ತಕ್ಕ ತೆರದಿ
ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು
ಸುಜನವಂದಿತ ಸಿರಿ ವಿಜಯವಿಠ್ಠಲನೆ||11||