ದೇವದೇವನ ನಿಜವನರಿಯಲು
Category: ಪರಬ್ರಹ್ಮ
Author: ವಚನವೇದ
ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ |
ಬೀಗಮುದ್ರೆಯನಿಟ್ಟ ಕೋಣೆಯೊ -
ಳೆಲೆವ ಮರುಳನ ತೆರನಿದೆ ||
ದಿವ್ಯ ಪ್ರೇಮಕೆ ದೊರೆವನವನು
ಶ್ರದ್ಧೆಗಲ್ಲದೆ ಒಲಿಯನು |
ವೇದಶಾಸ್ತ್ರ ಪುರಾಣದರ್ಶನ-
ದಾಚೆಗೇ ನಿಂತಿರುವನು ||
ಭಕ್ತಿಗೊಲಿಯುವ ಹೃದಯದಮೃತಾ -
ನಂದರೂಪನು ಎಂಬರು |
ಇದನರಿತೆ ಆ ಯೋಗಿವರ್ಯರು
ಯುಗಯುಗವು ತಪಗೈದರು ||
ಭಕ್ತಿಯೆಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು |
ಈ ರಹಸ್ಯವ ಜಗದ ಸಂತೆಯ
ಜನ ಸಮೂಹಕೆ ತಿಳಿಸೆನು ||
ಶ್ರೀ ಪ್ರಸಾದನು ನುಡಿವನೀತೆರ
“ಮಾತೃಭಾವದಿ ನೆನೆವೆನು |
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು” ||