ಕಂಡೆ ಕಮಲನಾಭನ ಕಣ್ಣಾರೆ

Category: ಶ್ರೀಕೃಷ್ಣ

Author: ವಿಜಯದಾಸ

ಕಂಡೆ ಕಮಲನಾಭನ ಕಣ್ಣಾರೆ
ಪುಂಡರೀಕನ ಪಾಲಿನ
ಪಂಡರಿವಾಸನ ಸಕಲ - ಬೊ
ಮ್ಮಾಂಡವ ಧರಿಸಿದನಾ ಪ
ಸುಲಭ ದೇವರ ದೇವ ನಾನಾ - ಪರಿ
ಮಳ ತುಲಸಿಗೆ ವಲಿವನ
ಕಲಿಕಾಲ ಸಲಹುವನ ಭವದ - ಸಂ
ಕಲೆ ಪರಿಹರಿಸುವನ ||1||

ಲಿಂಗ ಸಂಗವನೀವನ
ಜಗದಂತರಂಗ ಮೋಹನರಾಯನ
ಮಂಗಳ ದೇವೇಶನ ಸಿರಿಪಾಂಡು
ರಂಗ ನೆನಸಿಕೊಂಬನ||2||

ಜಗದ ಸದ್ಭರಿತ ನಾನಾ
ವನದಿ ಬಿಗಿದ ಪರಾಕ್ರಮನಾ
ನಗವನೆತ್ತಿದ ಧೀರನಾ ತನ್ನನು
ಪೊಗಳಲು ಹಿಗ್ಗುವನಾ ||3||

ಯಾದವ ಶಿರೋರನ್ನನ
ಕೊಳಲು ಊದುವ ಚೆನ್ನಿಗನಾ
ಆದಿ ಪರಮ ಪುಂಸನ ಸರ್ವ
ವೇದ ನಿಕರಮಯನಾ ||4||

ಇಟ್ಟಿಗೆಯಲಿ ನಿಂದನ ವರಂಗಳ
ಕೊಟ್ಟರೆ ತಪ್ಪದವನ
ಅಟ್ಟಿ ಖಳನ ಕೊಂದನಾ ವಿಜಯ
ವಿಠ್ಠಲ ಜಗದೀಶನಾ ||5||