ಕಲ್ಲಿನಿಂದ ಸರ್ವ ಫಲ ಬಾಹುದೊ
Category: ಶ್ರೀಕೃಷ್ಣ
Author: ವಿಜಯದಾಸ
ಕಲ್ಲಿನಿಂದ ಸರ್ವ ಫಲ ಬಾಹುದೊ |
ಕಲ್ಲು ಭಜಿಸಿದರೆ ಕೈವಲ್ಯ ತೋರುವುದೊ
ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು |
ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು |
ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು |
ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು||1||
ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ |
ಕಲ್ಲು ಕೊರೆಯಲು ಮೂರ್ತಿ ಮಂತಾಹುದು |
ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು |
ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು||2||
ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ |
ಕಲ್ಲು ಮನಸನು ಬಿಟ್ಟು ಪೂಜೆಮಾಡಿ |
ಕಲ್ಲಿನೊಳಗಿದ್ದು ಸಿರಿ ವಿಜಯವಿಠ್ಠಲ ಒಳ್ಳೆ |
ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ ||3||