ಕಿಂಕರನ ಧ್ವನಿಗೆ ಕೊಡು ಮತಿಯನು
Category: ಶ್ರೀಸರಸ್ವತಿ
Author: ವಿಜಯದಾಸ
ಕಿಂಕರನ ಧ್ವನಿಗೆ ಕೊಡು ಮತಿಯನು
ಪಂಕಜಾನಾಭನ ಸೊಸೆ ಸರಸ್ವತಿಯೆ
ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಬೊಂಬೆ
ವಿಕಸಿತ ಸುಲಲಿತಾಂಬೆ ಸುನಿತಂಬೆ
ನಿಕುರುಂಬೆ ಸುರರಂಭೆ ದಂತ ದಾಳಿಂಬೆ
ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ||1||
ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ
ಹಿಂಗಿಸಿ ಕೊಡು ಅಭಯ ಅಖಿಳ ಧ್ಯೇಯೆ
ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ
ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ||2||
ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ
ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ
ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ
ಜಯಜಯೆ ವಿಜಯ ಸಿರಿ ವಿಠ್ಠಲನ ಪೌತ್ರೆ ||3||