ಕೂಗೆಲೋ ಮನುಜ ಕೂಗೆಲೋ

Category: ಶ್ರೀಕೃಷ್ಣ

Author: ವಿಜಯದಾಸ

ಕೂಗೆಲೋ ಮನುಜ ಕೂಗೆಲೋ
ಸಾಗರಶಯನನೆ ಜಗಕೆ ದೈವವೆಂದು

ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು||1||

ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ
ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು||2||

ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ
ವರದ ಅಪಾರ ಸದ್ಗುಣನಿಲಯ
ಮುರುಮರ್ದನ ಮಂಜು ಭಾಷಣ ಕೇಶವ
ನಿರ್ಮಲ ದೇವ ಭೂವರಾಹಮೂರುತಿ ಯೆಂದು ||3||

ನಿಗಮವಂದಿತ ವಾರಿಜನಾಭ ಅನಿರುದ್ಧ
ಅಘನಾಶ ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ತ್ರಿಗುಣರಹಿತ ನರಮೃಗ ರೂಪಾನೆಂದು ||4||

ವಟಪತ್ರಶಯನ ಜಗದಂತರ್ಯಾಮಿ
ಕಟಕ ಮುತ್ತಿನಹಾರ ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು||5||

ವಿಷ್ಣು ಸಂಕರುಷಣ ಮಧುಸೂದನ ಶ್ರೀ
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||6||

ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾದರ್ನನೆ
ವಿಭುವೇ ವಿಶ್ವರೂಪ ವಿಶ್ವನಾಟಕ ಋ
ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||7||

ವೈಕುಂಠ ವಾಮನ ವಾಸುದೇವ ರಂಗ
ಲೋಕೇಶ ನವನೀತ ಚೋರ ಜಾರ
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||8||

ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಅಸುರ ಭಂಜನ ತ್ರಿವಿಕ್ರಮ ಕಪಿಲ
ಕುಸುಮ ಶರನಯ್ಯ ಶಾರ್ಙಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ||9||

ಸರ್ವನಾಮಕ ಸರ್ವಚೇಷ್ಟಕ ಸರ್ವೇಶ
ಸರ್ವಮಂಗಳ ಸರ್ವಸಾರ ಭೋಕ್ತ
ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ
ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು ||10||

ಈ ಪರಿ ಕೂಗಲು ಆಪತ್ತು ಪರಿಹಾರ
ಅಪಾರ ಜನ್ಮ ಬೆಂಬಿಡದಲೆ ಸಪ್ತ
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ ||11||