ಕೊಡುವವನು ನೀನು
Category: ಶ್ರೀಕೃಷ್ಣ
Author: ವಿಜಯದಾಸ
ಕೊಡುವವನು ನೀನು ಕೊಂಬುವನು ನಾನು
ಬಡಮನದ ಮನುಜನ ಬೇಡಿ ಫಲವೇನು
ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು
ಮದನ ಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೆ ||1||
ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ
ಮತಿಗೆಟ್ಟು ಪೊಗಳಿದರೆ ಅವನು ತನ್ನ
ಸತಿಸುತರ ಕೇಳಬೇಕೆಂದು ಮೊಗ ತಿರುಹುವ
ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೆ ||2||
ಹೀನ ವೃತ್ತಿಯ ಜನರಿಗಾಸೆಯನು ಬಡುವದು
ಗಾಣದೆತ್ತು ತಿರುಗಿ ಬಳಲಿದಂತೆ
ಭಾನು ಕೋಟಿ ತೇಜ ವಿಜಯವಿಠ್ಠಲರೇಯ
ನೀನಲ್ಲದನ್ಯತ್ರ ಕೊಡುಕೊಂಬುರಂಟೆ ||3||