ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ

Category: ಶ್ರೀಮಹಾಲಕ್ಷ್ಮಿ

Author: ವಿಜಯದಾಸ

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ
ಈರೇಳು ಲೋಕನಾಯಿಕೆ

ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು
ದೂರ ನೋಡದಲೆ ಅಪ
ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ
ವೇದವತಿಯೆ ರುಕ್ಮಿಣಿ
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಮಣಿ
ಸಾಧು ಜನರ ಹೃನ್ಮಂದಿರ ವಾಸಿನಿ
ಭೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಿಂದಲೆ ಮುಂದೆ ಗತಿಗೆ ಪಂಚ
ಭೇದಮತಿಯ ಕೊಡು ಮಾಧವ ಪ್ರಿಯಳೆ ||1||

ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ
ನಾಮದೊಳಪ್ಪ ಗುಣವಂತೆ
ಕೋಮಲವಾದ ವೈಜಯಂತೆ ಧರಿಸಿದ ಶಾಂತೆ
ಸೋಮಾರ್ಕ ಕೋಟಿ ಮಿಗೆ ಕಾಂತೆ
ತಾಮರಸಾಂಬಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ
ನಾಮವ ನುಡಿಸಿ ಉತ್ತಮರೊಡನೆ ಪರಿ
ಣಾಮವನೀಯುತ ||2||

ಅನೇಕಾಭರಣ ಭೂಷಿತೆ ಧರಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಆನಂದಲೀಲೆ ವಿಖ್ಯಾತೆ ಆದಿದೇವತೆ
ಗಾನವಿಲೋಲೆ ಸುರನುತೆ ನೀನೇ ಗತಿ ಎನಗಾರನ
ಕಾಣೆನೆ ದಾನಿ ಇಂದಿರಾದೇವಿ
ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು ||3||