ಗಂಗೆ ಶೋಭನ ತರಂಗೆ

Category: ಶ್ರೀಗಂಗೆ

Author: ವಿಜಯದಾಸ

ಗಂಗೆ ಶೋಭನ ತರಂಗೆ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ

ಇಂದ್ರಸೇನನು ಸ್ವರ್ಗವ ಪರಿಹರಿಸಿ ಯಿರಲು
ಉಪೇಂದ್ರ ಭಗವಂತ ಪಟುರೂಪ ಧರಿಸಿ
ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ
ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ ||1||

ಕಮಲಜನು ಪಾತ್ರಿಯೊಳು ಧರಿಸಿ ಸಿರಿಹರಿಪಾದ
ಕಮಲವನು ತೊಳಿಯಲಾವೇಗದಿಂದ
ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ
ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ||2||

ಧ್ರುವಲೋಕಕಿಳಿದು ಅಮರಾಲಯವ ಸಾರಿದೆ
ರವಿಯಂತೆ ಪೊಳೆವುತ ಅಜನಮಧ್ಯ
ತವಕದಿಂದಲಿ ಧುಮುಕಿ ಚತುರಭಾಗವಾದೆ
ಭವ ಪರಿಹರಿಸಿ ಭಾಗೀರಥಿ ಎನಿಸಿದೆ ||3||

ಶಿವನ ಮಸ್ತಕದಲ್ಲಿ ಶೋಭಿಸುವ ಮಹಾಮಹಿಮೆ
ಭವದೊರೆ ಭಗೀರಥಗೆ ಒಲಿದು ಬರುತ
ಕವಿಜನ್ಹು ಮುನಿಯಿಂದ ಪುಟ್ಟಿ ಹಿಮಗಿರಿದಾಟಿ
ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ||4||

ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಉದ್ಧಾರ ನಿಃಸಂದೇಹಾ
ಸಲಿಲವನು ಸ್ಪರ್ಶ ಮಜ್ಜನ ಪಾನ ಪಾಡಿದರೆ
ಪೊಳೆವ ವೈಕುಂಠಪುರ ಅವನ ಹೃದಯದಲಿ||5||

ಕುಲಪ್ರವಹವಾಗಿದ್ದ ಜೀವರ ಪುಣ್ಯವನು
ಹೇಳಿ ಕೇಳುವವನಾರು ಮೂಲೋಕದಿ
ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ
ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು ||6||

ದೇಶದೇಶದಲಿಂದ ಬಂದ ಸುಜನರ ಪಾಪ
ನಾಶ ಮಾಳ್ಪ ಕಾಮಿತ ಫಲಪ್ರದೆ
ಕಾಸಿ ನಿರ್ಮಿತ ಬಿಂದು ಮಾಧವ ಚಲುವ ಶ್ರೀನಿವಾಸ
ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ ||7||