ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ
Category: ಶ್ರೀಕೃಷ್ಣ
Author: ವಿಜಯದಾಸ
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ
ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ
ಸರಸಿಜಭವಾಗ್ರಜರುಳಿದವಾರು
ವರ ಸಕಲ ಮನೋಭೀಷ್ಟ ಕೈಕೊಳುತಾ
ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ
ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ ||1||
ಎತ್ತಿದ ಸತ್ತಿಗೆಯಿಂದ ಪೀಯೂಷ
ಸುತ್ತಲುದರೆ ಬಿಂದುಗಳೊಂದು
ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ
ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ ||2||
ದಂಡಿಗೆ ತಾಳ ಬೆತ್ತವ ಪಿಡಿದು ನಿಂದು
ತಂಡ ತಂಡದಲಿಂದ ಮಹಿಮೆಯನ್ನು
ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ
ತೊಂಡರು ಹರಿದಾಡಿ ಹಾಡಿ ಪಾಡುತಲಿರೆ||3||
ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ
ರವಿ ಶಶಿ ತುರಗ ಅಂದಣ ಮಿಕ್ಕಾದ
ನವರಾತ್ರಿಯೊಳಗೆಲ್ಲ ವಾಹನನಾದ ಅಂ
ದವನಾರು ಬಣ್ಣಿಪರು ಸಕಲ ಭೂಷಿತವಾಗೆ ||4||
ಚಿನುಮಯ ರೂಪ ವಿಚಿತ್ರ ಮಹಿಮ ದೇವ
ನೆನೆದವರ ಹಂಗಿಗೆ ಸಿಲುಕುವಾ
ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ
ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ ||5||