ಗಿರಿರಾಜ ಚಿತ್ತ ಉದಾರ ಜೀಯಾ

Category: ಶ್ರೀಕೃಷ್ಣ

Author: ವಿಜಯದಾಸ

ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ
ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು
ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ
ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ
ಭೀಕರ ಹರ ವೆಂಕಟ

ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ
ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ
ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು
ಪಾಪದ ಪರ್ವತ ಲೇಪವಾಗದಂತೀ
ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ ||1||

ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು
ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ
ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ
ಜಲಜ ಭವಾದ್ಯರು ಪೊಲಿದೊಲಿಯುತ
ತಲೆಯಾಗುವರಯ್ಯಾ ಭಳಿರೆ ಕಾಂಚನ ||2||

ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ |
ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ
ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ
ದೊರೆತನ ಠೀವಿಗೆ ಧರಣೀ ಮಂಡಲದಿ
ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ||3||

ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ
ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ
ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ
ಹದುಳವೇನಿಹುದು ಒಡಗೂಡಿಸದಲೆ
ಒದಗಿ ಪಾಲಿಸೋ ವಸುಮತಿ ಧರ ಫಣಿ ||4||

ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ
ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ
ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ
ಶ್ರೀವರ ಭೂಧರ ವಿಜಯವಿಠ್ಠಲ ಪಾರಾವರೇಶ
ಭೂದೇವರ ವರದ||5||