ಗುರು ಪುರಂದರ ದಾಸರೇ
Category: ಇತರೆ
Author: ವಿಜಯದಾಸ
ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ
ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ
ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕೃಪೆ ||1||
ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||2||
ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು ಭವಗಳ
ತರುಣಿ ಸಹಿತಾ ಹೊರಟನೆ ||3||
ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ||4||
ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು
ಭಜಿಪೆನೋ ಕೇಳ್ ಗುರುವರ ||5||